ಚಿನ್ನ, ಬೆಳ್ಳಿ, ಕೆತ್ತನೆ

ಚಿನ್ನ ಮತ್ತು ಬೆಳ್ಳಿ ಬಹಳ ಹಿಂದಿನಿಂದಲೂ ಮಾನವನಿಗೆ ಅಪೂರ್ವ ಲೋಹಗಳಾಗಿವೆ. ಅವನ್ನವನು ಆಭರಣಗಳಾಗಿ ಧರಿಸುತ್ತ ಬಂದಿದ್ದಾನೆ. ಹಣವಾಗಿ ಬಳಸಿದ್ದಾನೆ. ಇಂದಿಗೂ ಅವು ಅವನ ಶ್ರೀಮಂತಿಕೆಯ ಮಾಪನಗಳಾಗಿವೆ. ಚಿನ್ನ, ಬೆಳ್ಳಿಯ ಗೋಲಾಕಾರದ ಮತ್ತು ಸ್ತಂಭಾಕಾರದ ಚಿಕ್ಕ ಮಣಿಗಳು ಸಿಂಧೂ ಸಂಸ್ಕøತಿಯ ಉತ್ಖನನದಲ್ಲಿ ದೊರಕಿವೆ. ಚಿನ್ನದ ಮಣಿಗಳ ಮೇಲಿನ ಚಿಕ್ಕ ಚಿಕ್ಕ ಮುಚ್ಚಳಗಳು ರಚನಾ ಕೌಶಲದಲ್ಲಿ ಆಶ್ಚರ್ಯಕಾರಕವಾಗಿವೆ. ವೇದಗಳಲ್ಲಿ ಮತ್ತು ಪ್ರಾಚೀನ ಕಾವ್ಯ ಪುರಾಣಗಳಲ್ಲಿ ಬಂಗಾರ ಮತ್ತು ಬೆಳ್ಳಿಯಿಂದ ತಯಾರಿಸಿದ ನಾನಾ ಆಭರಣಗಳ ಹೆಸರುಗಳು ದೊರಕುತ್ತವೆ. ಕರ್ಣ, ಶೋಭಾನ, ಕುಂಭ, ಖಾಡಿ, ರುಕ್ಮ, ಸೃಜ ರಸನ, ನಿನಭಗಳೆಂಬ ಆಭರಣಗಳು ಕ್ರಮವಾಗಿ, ಕಿವಿ, ತಲೆ, ಪಾದ, ಕೈ ಕೊರಳು, ಟೊಂಕ-ಇವುಗಳಿಗೆ ಧರಿಸುವಂತವು ಆಗಿದ್ದವು. ಮಹಾ ಕಾವ್ಯಗಳ ಕಾಲದಲ್ಲಿ ಆಭರಣಗಳಲ್ಲಿನ ಕೌಶಲ ಪರಾಕಾಷ್ಠೆಯನ್ನು ಹೊಂದಿತ್ತು. ತಕ್ಷಶಿಲೆ, ಸಿತ್ರಪ, ಭೀರಗಳಲ್ಲಿ ನಡೆದ ಅಗೆತಗಳಿಂದ ದೊರಕಿದ ಆಭರಣಗಳಲ್ಲಿ ಗ್ರೀಕ್ ಕಲೆಯ ಪ್ರಭಾವ ಕಂಡು ಬರುತ್ತದೆ. ಸಾಂಚಿಯಲ್ಲಿ ದೊರಕಿದ ಕೊರಳಸರ, ಗೆಜ್ಜೆ-ಟಿಕ್ಕಿಗಳು ಅನುಪಮ ನಕ್ಷೆಯಿಂದ ತುಂಬಿವೆ. ಅಜಂತ, ಬೇಲೂರುಗಳಲ್ಲಿನ ಶಿಲ್ಪದಲ್ಲಿ ಕಂಡುಬರುವ ಆಭರಣಗಳ ನಕ್ಷೆಗಳು ಆಧುನಿಕವೂ ವೈವಿಧ್ಯಪೂರ್ಣವೂ ಆಗಿವೆ. ಮೊಗಲರ ಕಾಲದಲ್ಲಿ ಆಭರಣ ಪ್ರಿಯತೆ ಬಹಳವಾಗಿತ್ತು. ಜಮ್ಮು ಎಂಬ ಕಿವಿಯ ಆಭರಣವಂತೂ ಲೋಕಪ್ರಿಯವಾಗಿತ್ತು. ಮುಕುಟ, ನೆತ್ತಿಮಣಿ, ನತ್ತು, ಚಿತ್ರಾಣ, ಬುಗುಡಿ, ಬುಲಾಕು, ಕಂಠೀಸರ, ಕಂಕಣ, ವಂಕಿ ಜೂರಿಕ ಇತ್ಯಾದಿ ಆಭರಣಗಳು ಕಾಲಕ್ಕನುಸಾರವಾಗಿ ಬೇರೆ ಬೇರೆ ಹೆಸರುಗಳಿಂದ ಆಕಾರ, ಅಳತೆಗಳಿಂದ ರೂಢಿಯಲ್ಲಿವೆ. 

ಚಿನ್ನ, ಬೆಳ್ಳಿಯ ಕೆಲಸ ಮಾಡುವವರು ಬಹುತೇಕ ಪರಂಪರೆಯನ್ನೇ ಅನುಸರಿಸುತ್ತಾರೆ. ಅವರ ಉದ್ಯೋಗ ಪರಂಪರಾಗತವಾಗಿರುತ್ತದೆ. ಅವರು ದೇವರಪೂಜೆ, ಧರ್ಮಕಾರ್ಯಗಳಿಗೆ ಬೇಕಾದ ಸಲಕರಣೆ, ಆಭರಣಗಳನ್ನು ಶಾಸ್ತ್ರಬದ್ಧವಾಗಿ ಮಾಡುತ್ತಾರೆ. ಆದರೆ ಸ್ತ್ರೀಪುರುಷರು ಧರಿಸುವ ಆಭರಣಗಳನ್ನು ಆಯಾ ಕಾಲದ ರುಚಿ, ಬೇಡಿಕೆಗಳನ್ನು ಅನುಸರಿಸಿ ತಯಾರಿಸುತ್ತಾರೆ. ಚಿನ್ನ ಬೆಳ್ಳಿಯ ಉದ್ಯೋಗವನ್ನು ವಿಶಿಷ್ಟ ಜಾತಿಯವರು ಮಾಡುತ್ತಿದ್ದು, ಅವರನ್ನು ವಿಶ್ವಕರ್ಮರು, ವಿಶ್ವ ಬ್ರಾಹ್ಮಣರು, ದೈವಬ್ರಾಹ್ಮಣರು, ಪಾಂಚಾಲಿಯರು, ಪತ್ತಾರರು, ಸೋನಾರರು, ಅಕ್ಕಸಾಲಿಗರು, ಚಿನಿವಾರರು, ಆರ್ಕಚಾರಿಗಳು, ಆಚಾರಿಗಳು, ಪಂಚಾನನರು ಸುವರ್ಣಕಾರರು ಎಂದೂ ಕರೆಯುತ್ತಾರೆ. ಆಧುನಿಕ ನಾಗರಿಕತೆಯಲ್ಲಿ ಜನರು ಸೂಕ್ಷ್ಮತರ ಮತ್ತು ವೈವಿಧ್ಯಮಯವಾದ ಆಭರಣಗಳನ್ನು ಹೆಚ್ಚು ಹೆಚ್ಚಾಗಿ ಇಚ್ಛಿಸುತ್ತಾರಾಗಿ ಚಿನಿವಾರರು, ಪರಂಪರಾಗತವಾಗಿ ಬಂದ ಆಭರಣ ತಯಾರಿಕೆಯ ಜ್ಞಾನ ಸಾಕಾಗದ್ದರಿಂದ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೊರಗಿನ ನೌಕರರನ್ನು ನಿಯಮಿಸಿಕೊಳ್ಳುವ ರೂಢಿ ಈಚೀಚೆಗೆ ಬರುತ್ತಿದೆ. ಒಂದು ಚಿಕ್ಕ ಒಳದಲ್ಲಿ ಅಕ್ಕಸಾಲಿಗನ ಕೆಲಸ ನಡೆದಿರುತ್ತದೆ. ಅದು ಬಹುತೇಕ ಮನೆಯ ಹೊರಭಾಗ. ಅವನ ಸುತ್ತು ಮುತ್ತು ಆಭರಣಗಳನ್ನು ತಯಾರಿಸಲು ಬೇಕಾದ ಸಲಕರಣೆಗಳನ್ನು ಇಟ್ಟು ಕೊಂಡಿರುತ್ತಾನೆ. ಐರಣಿ, ಸುತ್ತಿಗೆ, ಚಿಮಟಿಗೆ, ಊದುಗೊಳವೆ, ಅಗ್ನಿಕುಂಡ, ಕುದ್ದಾಲಿ, ಕೆತ್ತನೆಯ ಜಾಣಗಳು, ಬೈರಿಗೆ, ಕರಗಸ, ತರತರದ ಅಚ್ಚುಗಳು, ಪಂಕ, ಅರಗಳು, ಕಂಪಾಸು, ತ್ರಾಸ, ತೂಕ-ಅಳತೆಗಳು, ಗುಂಜಿಗಳು-ಇವು ಅವನ ಕೆಲವು ಹತಾರಗಳು, ಚಿಮಣಿ, ಇಕ್ಕಳ, ತಂತಿ ಪಿಟ್ಟಾಡಾಯ್ ಯಂತ್ರಗಳು-ಇವು ನಯಗೊಳಿಸುವ ಸಾಧನಗಳು. ಅಲ್ಲದೆ, ಬಂಗಾರವನ್ನು ಶುದ್ಧಗೊಳಿಸಲು ನೈಟ್ರಿಕ್ ಮತ್ತು ಸಲ್‍ಫ್ಯುರಿಕ್ ಆಸಿಡ್ಡುಗಳು, ಆಭರಣದ ವಿವಿಧ ಮಾದರಿಯ ಚಿತ್ರಗಳುಳ್ಳ ಪುಸ್ತಕಗಳು ಅವನ ಬಳಿ ಇರುತ್ತದೆ.

	ಚಿನ್ನ-ಬೆಳ್ಳಿಯ ಕೈಗಾರಿಕೆ ಕೇವಲ ಕೈಕಸುಬಲ್ಲ. ಅದು ಕಲೆ, ಉಪಯುಕ್ತ ಕಲೆ, ಕಲೆ ಮತ್ತು ಕೈಕಸಬುಗಳ ಕೌಶಲದಲ್ಲಿ ಈ ದಂಧೆ ಲಾಭದಾಯಕವೂ ಆಗಿದೆ. ಆರ್ಥಿಕವಾಗಿ ಈ ವೃತ್ತಿ ಮಧ್ಯಮ ವರ್ಗಕ್ಕೆ ಸೇರುತ್ತದೆ. ಗ್ರಾಹಕರ, ಅಕ್ಕಸಾಲಿಗರ ಮಧ್ಯದಲ್ಲಿ ದಲಾಲಿ ಮಾಡುವ ಸರಾಫರು ಮಾತ್ರ ಶ್ರೀಮಂತ ವರ್ಗಕ್ಕೆ ಸೇರುತ್ತಾರೆ. ಈ ದಂಧೆಗೆ ಪ್ರಾಮಾಣಿಕತೆ, ಕುಶಲತೆ ಅಷ್ಟೇ ಮಹತ್ತ್ವದ್ದಾಗಿವೆ.

	1962ರಲ್ಲಿ ಭಾರತದ ಸುವರ್ಣ ನಿಯಂತ್ರಣ ಕಾನೂನು ಬಳಕೆಗೆ ಬಂತು. ಅದರ ಪ್ರಕಾರ ಬಂಗಾರವನ್ನು ಸಂಗ್ರಹಿಸಿಕೊಟ್ಟುಕೊಳ್ಳಬಾರದೆಂದಾಯಿತು. 14 ಕ್ಯಾರೆಟ್ಟುಗಳಿಗಿಂತ ಹೆಚ್ಚು ಶುದ್ಧ ಬಂಗಾರವನ್ನು ಉಪಯೋಗಿಸಿ ಆಭರಣಗಳನ್ನು ಮಾಡಬಾರದೆಂದು ನಿರ್ಬಂಧಿಸಲಾಯಿತು. ಇದರಿಂದ ಅಕ್ಕಸಾಲಿಗರಿಗೆ ತಮ್ಮ ಕಡೆಗೆ ಇರುವ ಸಲಕರಣೆಗಳಿಂದ ಆಭರಣ ತಯಾರಿಸಲು ಸಾಧ್ಯವಾಗದಷ್ಟು ಧಾತು ಗಟ್ಟಿಯಾಯಿತು. ಹೆಚ್ಚು ಬಂಡವಾಳವನ್ನು ತೊಡಗಿಸಿ ಆಭರಣ ತಯಾರಿಸಲು ಬೇಕಾಗುವ ಯಂತ್ರಗಳನ್ನು ಕೊಳ್ಳಬೇಕಾದ ಪ್ರಸಂಗ ಒದಗಿತು. 1967ರಲ್ಲಿ ಈ ಕಾಯದೆಯಲ್ಲಿ ಕೆಲಮಟ್ಟಿನ ಮಾರ್ಪಾಡು ನಡೆಯಿತಾದರೂ ಮೊದಲಿನಷ್ಟು ಈ ಉದ್ಯೋಗ ಲಾಭದಾಯಕವೂ ಸುಲಭವೂ ಆಗಿ ಉಳಿಯಲಿಲ್ಲ.
	(ನೋಡಿ- ಅಕ್ಕಸಾಲಿಗರ-ಉದ್ಯಮ)           						 (ಆರ್.ಜಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ